ಬೊಳ್ಳೊಳ್ಳಿಮಾರುಗುತ್ತಿನ ಚರಿತ್ರೆ
ಬೊಳ್ಳೊಳ್ಳಿಮಾರುಗುತ್ತು ಪೆರ್ಮುದೆ ಊರಿನಲ್ಲಿ ಪ್ರತಿಷ್ಠಿತ ಬಂಟ ಮನೆತನವಾಗಿದ್ದು. ಊರು ಪರವೂರಿನ ದೇವಸ್ಥಾನ ದೈವಸ್ಥಾನಗಳಲ್ಲಿ ಮಾನ ಮರ್ಯಾದೆ ಪಡೆಯುತ್ತಿರುವ ಮನೆತನ ಈ ಮನೆಯ ಕುಟುಂಬಿಕರು ತಾಲಿಯನ್ನ ಬರಿಯವ ರಾಗಿದ್ದು ಇವರಿಗೆ ಕವತ್ತಾರು ಆದಿ
ಅಲಡೆಯಾಗಿದೆ.
ಈ ಕುಟುಂಬಿಕರಿಗೆ ಬಜಪೆಯ ನೆಲ್ಲಿದಡಿ ಗುತ್ತು ಮೂಲದ ಮನೆಯಾಗಿದೆ.ಕುಟುಂಬಿಕರು ಆ ಮನೆಯೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕು. ತುಳುನಾಡಿನ ಭೂತಾಳ ಪಾಂಡ್ಯನ ಕಟ್ಟಾದ ಅಳಿಯ ಸಂತಾನ ಕಟ್ಟು ಎನ್ನುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದ ಮನೆತನ ವಾಗಿದೆ. ಭಾರತ ಸರಕಾರ ಜಾರಿಗೆ ತಂದ ಭೂಸುಧಾರಣಾ ಕಾನೂನಿನ ನಂತರವೂ ಸುಮಾರು
50 ಎಕ್ರೆಯಷ್ಟು ಸ್ವಂತ ಭೂಮಿಯನ್ನು ಹೊಂದಿದ ಮನೆತನ ಕೆಲವು ಭೂಮಿ ಭೂಸುಧಾರಣಾ ಕಾನೂನಿಂದ ಕಳೆದುಕೊಂಡಿದ್ದೇವೆ. ಈ ಮನೆತನದ ಸರ್ವ ಜಮೀನು 1994,2005 ಹಾಗೂ 2009 ಹೀಗೆ 3 ಹಂತದಲ್ಲಿ ಕೈಗಾರಿಕೆಗೆ ನಮ್ಮ ಜಮೀನು ಸರ್ವಾದಿಗಳು ಸ್ವಾಧೀನ ಹೊಂದಿತ್ತು.
ಈ ಮನೆತನವು ಪೂರ್ವದಿಕ್ಕಿಗೆ ಮುಖಮಾಡಿರುವ ದೊಡ್ಡ ಹೆಬ್ಬಾಗಿಲನ್ನು ಹೊಂದಿತ್ತು. ಅದರಿಂದ ದಾಟಿ ಒಳಹೋದಾಗ ಎರಡು ಬದಿಯಲ್ಲೂ ಜಗಲಿ ಯಂತಿರುವ ಮೊಗಂಟಾವು ಇದ್ದು ಅದನ್ನು ದಾಟಿದಾಗ ನಡು ಅಂಗಲ 4 ಸುತ್ತಲೂ ಮನೆ ಇದ್ದು ನಡು ಅಂಗಳದಲ್ಲಿ ತುಳಸಿ ಕಟ್ಟೆ ನಡು ಅಂಗಳದಲ್ಲಿ ಪೂರ್ವಕ್ಕೆ ಮುಖ ಮಾಡಿ ಜಮಾದಿಯ ಚಾವಡಿ. ಈ ಚಾವಡಿಯಲ್ಲಿ
ಉತ್ತರಕ್ಕೆ ಮುಖಮಾಡಿ ಜಮಾದಿಯ ಗುಂಡದ ಬಾಗಿಲು ಇತ್ತು. ಚಾವಡಿಯಲ್ಲಿ ಎರಡು ದೊಡ್ಡ ಭೋದಿಗೆ ಕಂಬಗಳಿದ್ದು ಮೇಲೆ ಮರದ ಮುಚ್ಚಿಗೆ ಇತ್ತು. ಮನೆಯ ಮೊಗಂಟೆಯ(ಹೆಬ್ಬಾಗಿಲು) ಎದುರು ದೊಡ್ಡ ಬಯಲು ಗದ್ದೆಗಳು, ಗದ್ದೆಯ ಕಟ್ಟ ಪುನಿಯಲ್ಲಿ ತೆಂಗು, ಕಂಗು ,ಬಾಳೆ ಗಿಡಗಳಿದ್ದು ಹತ್ತಿರವೇ
ಹರಿಯುವ ನೀರಿನ ತೋಡು.ಎಡಭಾಗದಲ್ಲಿ ಬೆಟ್ಟು ಗದ್ದೆಗಳು ಹಿಂಭಾಗದಲ್ಲಿ ಹಲಸು ಮಾವು ಗೇರು ಹೆಬ್ಬಲಸು ಗಾಳಿ ಗೋಲಿ ಮೊದಲಾದ ವಿಧವಿಧದ ಗಿಡ ಮರಗಳಿಂದ ಕೂಡಿದ ಗುಡ್ಡ ಒಟ್ಟಿನಲ್ಲಿ ಉತ್ತಮ ಹಳ್ಳಿಯ ವಾತಾವರಣ ಹೊಂದಿದ ಮನೆ ಬೊಳ್ಳೊಳ್ಳಿಮಾರು ಗುತ್ತು.
ಈ ಮನೆಯ ಈಶಾನ್ಯ ಭಾಗದಲ್ಲಿ ಹರಿಯುವ ಸಣ್ಣ ತೋಡಿನ ಹತ್ತಿರ ನಾಗಬನ ವಿದೆ. ನಾಗಬನದಲ್ಲಿ ನಾಗ ಮತ್ತು ರಕ್ತೇಶ್ವರಿ ಸಾನಿಧ್ಯವಿದೆ.
ಧರ್ಮ ಚಾವಡಿಯಲ್ಲಿ ಜುಮಾದಿ ಬಂಟ. ಚಾವಡಿಯ ಕೆಳಗಿನ ಅಂತರದಲ್ಲಿ ಪೊಸಪ್ಪೆ , ವಾಯುವ್ಯ ಮೂಲೆಯ ಎತ್ತರದ ಜಾಗದಲ್ಲಿ ಉಲ್ಲಾಯ ಮತ್ತು ಪಿಲಿಚಂಡಿ ಸಾನಿಧ್ಯ ಅದರ ಹತ್ತಿರದ ಗದ್ದೆಯಲ್ಲಿ ಕಟ್ಟಲ್ತಾಯ ಪಂಜುರ್ಲಿ ನೈಋತ್ಯ ಭಾಗದ " ಕುಮೇರು" ಎನ್ನುವ ಜಾಗದಲ್ಲಿ ವರ್ತೆ ಪಂಜೂರ್ಲಿ ಮತ್ತು ಜಾಗದ ಪಂಜುರ್ಲಿ ಸಾನಿಧ್ಯ. ಮನೆಯ
ವಾಯುವ್ಯ ಮೂಲೆಯಲ್ಲಿರುವ ದೂರದ ಗದ್ದೆಯ ಬದಿಯ ಮಾವಿನ ಮರದ ಬುಡದಲ್ಲಿ ರಾಹುವನ್ನು ನಂಬಿದ್ದರು .ಈ ಮನೆತನದ ಕುಟುಂಬಿಕರಿಗೆ ತಿರುಪತಿ ಮತ್ತು ಧರ್ಮಸ್ಥಳ ಮಂಜುನಾಥ ದೇವರಿಗೆ ದೀಪಾವಳಿ ಸಮಯದಲ್ಲಿ ಪನವು( ಮುಡಿಪು) ಕಟ್ಟುವ ಸಂಪ್ರದಾಯವಿದೆ.
ಈ ಮನೆತನದ ರಾಜನ್ ದೈವಗಳಾದ ಜುಮಾದಿ ಬಂಟ ಉಲ್ಲಾಯ ಪಿಲಿಚಂಡಿ ಹಾಗೂ ಕಟ್ಟಲ್ತಾಯ ಪಂಜುರ್ಲಿ ದೈವಗಳ ಸಂಕ್ರಮಣ ಹಾಗೂ ಇತರ ಪರ್ವಾಧಿಗಳನ್ನು ಮಾಡಲು ಗಡಿ ಹಿಡಿಯಬೇಕು ಈ ಮನೆತನದ ಗಡಿ ಹಿಡಿದವರನ್ನು ಮಾಡ ಎಂದು ಕರೆಯುತ್ತಾರೆ.
ಈ ಗಡಿ ಹಿಡಿದ ವ್ಯಕ್ತಿ ವೃತ ನಿಯಮಗಳಿಂದ ದೈವದ ಸೇವೆ ಮಾಡಬೇಕು. ಈ ವ್ಯಕ್ತಿಗೆ ಕುಟುಂಬದಲ್ಲಿ ನಡೆಯುವ ಯಾವುದೇ ಶುಭ ಕಾರ್ಯಗಳಲ್ಲಿ ಪ್ರಥಮ ಮನ್ನಣೆ ಸಲ್ಲಬೇಕು. ಬೇಸಾಯ ಈ ಮನೆತನದ ಮುಖ್ಯ ಕಸುಬಾಗಿದ್ದು ಏನೇಲು, ಸುಗ್ಗಿ ಮತ್ತು ಕೊಳಕೆ ಎನ್ನುವ ಮೂರು ಬೆಳೆಗಳನ್ನು ಒಂದು ವರ್ಷದಲ್ಲಿ ಬೆಳೆಯುತ್ತಿದ್ದರು. ಮನೆಯ ಮುಂಭಾಗದಲ್ಲಿ
ಹರಿಯುತ್ತಿದ್ದ ನೀರಿನ ತೊಡಿಗೆ ಮಣ್ಣಿನ ಅಣೆಕಟ್ಟು ಕಟ್ಟಿ ಅದರ ನೀರನ್ನು ಬೇಸಾಯಕ್ಕೆ ಉಪಯೋಗಿಸುತ್ತಿದ್ದರು. ಇದರ ಜೊತೆಗೆ ತೆಂಗು ಕಂಗು ಬಾಳೆ ತೋಟವನ್ನು ಹೊಂದಿದ್ದರು.ಗದ್ದೆಯಲ್ಲಿ ಬತ್ತದ ಜೊತೆಗೆ ಉದ್ದು ಹುರುಳಿ ಹೆಸರು ಗೆಣಸು ಸೌತೆ ಹಾಗೂ ಇನ್ನಿತರ ತರಕಾರಿಗಳನ್ನು
ಬೆಳೆಸುತ್ತಿದ್ದರು.ಕೃಷಿಗೆ ಬೇಕಾದ ಗೊಬ್ಬರವನ್ನು ಕೋಣ ದನಕರುಗಳನ್ನು ಸಾಕಿ ತಯಾರಿಸುತ್ತಿದ್ದರು.ಮನೆಯ ಹಟ್ಟಿ ತುಂಬಾ ಕೋಣ ದನಕರುಗಳಿದ್ದವು .2000 ಇಸವಿವರೆಗೆ ಈ ಮನೆಯಲ್ಲಿ ಐದು ಜೊತೆ ಕೋಣಗಳಿದ್ದವು .ಭತ್ತದ ಪೈರು ರಾಶಿ ಮಾಡಲು ಭತ್ತ ಒಣಗಿಸಲು ಮನೆಯ ಅಂಗಳ ಅಲ್ಲದೆ
ಬೇರೆಯೇ ಒಂದು ದೊಡ್ಡ ಜಾಗ ಇತ್ತು.ಇದನ್ನು " ಮಿತ್ತಜಾಲ್ "ಎಂದು ಕರೆಯುತ್ತಿದ್ದರು. ನಮ್ಮ ಮನೆಯ ಹತ್ತಿರ ನಮ್ಮ ಮನೆಯ ಕೆಲಸಕ್ಕೆ ಬರಲು ಕೆಲವು ಜನರಿಗೆ ನಮ್ಮ ಜಾಗದಲ್ಲಿ ಮನೆ ಕಟ್ಟಲು ವ್ಯವಸ್ಥೆ ಮಾಡಿದ್ದೆವು. ಇದನ್ನು "ಒಕ್ಕಲು" ಮನೆ ಎಂದು ಕರೆಯುತ್ತಿದ್ದರು.
ಕಿನ್ನಿಗುರಿ ಮತ್ತು ಬಾಬಗುರಿ ಎನ್ನುವ 2 ಮನೆಗಳು ಜೊತೆಗೆ ಚುಂಗುಲಂಡ ಎನ್ನುವ ಗದ್ದೆಯ ಹತ್ತಿರ ಹಲವಾರು ಮುಸ್ಲಿಂ ಮನೆಗಳು ಇದ್ದವು. ಇವರು ನಮ್ಮ ಮನೆಗೆ ಕರೆದಾಗ ಕೆಲಸಕ್ಕೆ ಬಂದು ಯಜಮಾನರ ಮನೆಗೆ ಗೌರವ ತೋರಿಸುತ್ತಿದ್ದರು. ಇಂತಹ ಒಕ್ಕಲಿನ ಮನೆಯಲ್ಲಿ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳಾದರೆ ನಮ್ಮ ದೈವಗಳಿಗೆ
ಶುಭ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ಹೂವಿನೊಂದಿಗೆ ಚಾವಡಿಗೆ ಮೊದಲು ಸಲ್ಲಿಸುತ್ತಿದ್ದರು. ಅವರ ಮನೆಯಲ್ಲಿ ಶುಭ ಕಾರ್ಯಗಳಾಗುದಾದರೆ ಯಜಮಾನರ ಮನೆಗೆ ಹೆಸರುಬೇಳೆ ಹಾಗೂ ಬೆಲ್ಲ ನೀಡುತ್ತಿದ್ದರು. ಜೊತೆಗೆ ವೀಳ್ಯದೆಲೆ ಅಡಿಕೆ ನೀಡಿ ನಮ್ಮನ್ನು ಗೌರವಿಸುತ್ತಿದ್ದರು. ಈ
ಮನೆತನದ ಹಿರಿಯರು ಹಿಂದೆ ಮದುವೆ ಸಂಬಂಧ ಬೆಳೆಸುವಾಗ ಗುತ್ತು ಬರ್ಕೆ ಭಾವ ಮತ್ತು ಪರಾಡಿ ಹೀಗೆ ಒಳ್ಳೆಯ ಮನೆತನದಿಂದ ಹೆಣ್ಣನ್ನು ತಂದು ಹಾಗೂ ಪ್ರತಿಷ್ಠಿತ ಮನೆಗಳಿಗೆ ಹೆಣ್ಣನ್ನು ಕೊಡುವ ಸಂಪ್ರದಾಯ ಮಾಡಿ ತನ್ನ ಮನೆತನದ ಘನತೆ ಗೌರವ ಹೆಬ್ಬಿಸುತ್ತಿದ್ದರು.
ಈ ಮನೆತನದ ಹಿರಿಯರ ಮಾಹಿತಿ ಸುಮಾರು 150 ವರ್ಷಗಳಷ್ಟು ಹಿಂದಿನದ್ದು ನಮಗೆ ತಿಳಿದಿದೆ. ಅದಕ್ಕಿಂತ ಹಿಂದಿನ ಮಾಹಿತಿ ನಮ್ಮಲ್ಲಿ ಲಭ್ಯವಿಲ್ಲ. ಉಮ್ಮಲು ಎನ್ನುವ ಏಳನೇ ತಲೆಮಾರಿನ ಹೆಂಗಸಿನಿಂದ ಈಗಿರುವ ನಮ್ಮ ವಂಶವೃಕ್ಷ ಬೆಳೆದಿದೆ. ಈ ಹೆಂಗಸನ್ನು ಕುತ್ತೆತ್ತೂರು ಕೊಡೆಪ ಬಾಳಿಕೆ ತಿಮ್ಮಣ್ಣ ಹೆಗ್ದೆ ಎಂಬವರಿಗೆ ಮದುವೆ
ಮಾಡಿ ಕೊಟ್ಟರು.ಅವರಿಂದ ಹುಟ್ಟಿದ 4 ಹೆಣ್ಣು ಮಕ್ಕಳಿಂದ ಈಗಿರುವ 4 ಕವರು ಆರಂಭವಾಯಿತು.ಇದಲ್ಲದೆ ಹಿಂದೆ ಈ ಮನೆತನದಿಂದ ದೂರ ಉಳಿದ ನಂತರ ಜ್ಯೋತಿಷ್ಯದಲ್ಲಿ ಕಂಡುಬಂದಂತೆ ಮತ್ತೆ ಈ ಕುಟುಂಬವನ್ನು ಸೇರಿದ ಮೀನಕ್ಕೆ ಎಂಬ ಹೆಂಗಸಿನ ಕವರು ಹಾಗೂ 2013 ರಲ್ಲಿ ಸೇರಿದ ಜೋಕಟ್ಟೆ
ಇನ್ನೊಂದು ಕವರು ಈ ಮನೆತನಕ್ಕೆ ಸೇರಿಕೊಂಡಿದ್ದಾರೆ.ಹಿಂದೆ ಕೂಡ ಕುಟುಂಬ ಇದ್ದ ಕಾರಣದಲ್ಲಿ ಒಂದು ಹೊತ್ತಿಗೆ 20 ಸೇರು ಅಕ್ಕಿ ಬೇಯಿಸಿದರೆ ಸಾಕಾಗದಷ್ಟು ಜನರು ಇಲ್ಲಿದ್ದರಂತೆ.
ಈ ಮನೆತನದ ಹಿರಿಯರು ದಾನ ಧರ್ಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಊರಿನಲ್ಲಿ ಹಾಗೂ ಪರವೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಬ್ರಹ್ಮಕಲಶ ಹಾಗೂ ಧರ್ಮನೇಮ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರೆ ಕಾಣಿಕೆ ಸಲ್ಲಿಸಿ ಮನೆತನದ ಗೌರವ ಕಾಪಾಡುತ್ತಿದ್ದರು. ಊರಿನ ದೇವಸ್ಥಾನ ದೈವಸ್ಥಾನ ಸಂಘ-ಸಂಸ್ಥೆಗಳಿಗೆ ತಮ್ಮ
ಕೈಲಾದ ಧನಸಹಾಯ ನೀಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಮದುವೆ ಆಗುವ ಸಂದರ್ಭ ಕಷ್ಟದಲ್ಲಿರುವವರು ಮನೆಕಟ್ಟುವಾಗ ಬೇರೆ ಬೇರೆ ರೂಪದಲ್ಲಿ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ.ಹಿರಿಯರು ಮಾಡುತ್ತಿದ್ದ ಈ ಸತ್ಕರ್ಮಗಳನ್ನು ಈಗಿನ ತಲೆಮಾರಿನವರು ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಅಷ್ಟಮಿ
ದೀಪಾವಳಿ ಸಮಯದಲ್ಲಿ ಒಕ್ಕಲಿನವರು ಹಾಗೂ ಗದ್ದೆಯ ಕೆಲಸಕ್ಕೆ ಬರುವ ಗಂಡಸರು ಹೆಂಗಸರು ಮನೆಗೆ ಬಂದಾಗ ಅವರಿಗೆ ಅಕ್ಕಿ ಮತ್ತು ತೆಂಗಿನಕಾಯಿ ನೀಡುವ ಕ್ರಮವಿತ್ತು.ಈ ಕುಟುಂಬಿ ಕರು ಮದುವೆ, ಮನೆ ಒಕ್ಕಲು ಮೊದಲಾದ ಶುಭ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಮೊದಲು ಈ ಚಾವಡಿಗೆ
ತಂದು ಹೂವಿನೊಂದಿಗೆ ಕಾಗದ ದೈವಕ್ಕೆ ಇಡುವ ಸಂಪ್ರದಾಯವಿದೆ .ಈ ಮನೆಯ ಕುಟುಂಬಿಕರು ಮಂತ್ರವಾದಿಗಳ ತಾಯಿತ (ಉರ್ಕು)ಕಟ್ಟ ಬಾರದೆಂದು ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಕೋಟೆದ ಬಬ್ಬು ದೈವದ ಗಂಧ ಹಾಕಿಕೊಂಡು ಈ ಮನೆಗೆ ಬರಬಾರದು. ಮಾಡರೂ ಕೋಟೆದ ಬಬ್ಬು ದೈವದ ಕೊಳಕ್ಕೂ
ಹೋಗಬಾರದು. ಜೊತೆಗೆ ಮಾರಣಕಟ್ಟೆ (ಅಮ್ನೂರು) ದೇವಿಯ ಪ್ರಸಾದ ತರಬಾರದು ಈ ಮನೆಯಲ್ಲಿ ಗಂಡು ಮಕ್ಕಳ ಹೆಂಡತಿಯರಿಗೆ ಬಯಕೆ( ಸೀಮಂತ)ಅಗುದಾದರೆ ಕೋಳಿ ಬಿಡುವ ಸಂಪ್ರದಾಯವಿಲ್ಲ. ಮನೆಯಲ್ಲಿ ಹಾಲು ಕೊಡುವ ದನವಿದ್ದರೆ ಹೆಂಗಸರು ಬೆಳಿಗ್ಗೆ ಹಾಲು ಕರೆದು ಜುಮಾದಿಯ ಹೊಸ್ತಿಲಲ್ಲಿ
ಇಡುವ ಪದ್ಧತಿಯಿದೆ. ಕೋಳಿ-ಮೀನು ಹಾಗೂ ವಿಶೇಷ ತಿಂಡಿ-ತಿನಸು ಮಾಡಿದರೆ ಹಿರಿಯರಿಗೆ ತಡ್ದ್ಯದಲ್ಲಿ ಅಂದರೆ ಕೈಸಟಿಯಲ್ಲಿ ಇಡುವ ಪದ್ಧತಿ ಇದೆ. ಈ ಮನೆಯ ಕುಟುಂಬಿಕರು ಪರವೂರಿನಲ್ಲಿ ಸತ್ತರೆ 16ನೇ ರಾತ್ರಿ ಅವರನ್ನು ಕುಟುಂಬದ ಹಿರಿಯರೊಂದಿಗೆ ಸೇರಿಸುವ ಕ್ರಮವಿದೆ. ಹೆತ್ತ
ಮನೆಗೆ ಹಾಗೂ ಸತ್ತ ಮನೆಗೆ ಹೋದರೆ ನ್ನಾನ ಮಾಡದೆ ಚಾವಡಿಗೆ ಪ್ರವೇಶಿಸಬಾರದು. ಹಿಂದೆ ನಮ್ಮ ಜಾತಿಗಿಂತ ಕೀಳು ಜಾತಿಯವರು ಜುಮಾದಿ ಚಾವಡಿಗೆ ಪ್ರವೇಶಿಸಲು ಇರಲಿಲ್ಲ. ಆದರೆ ಕಾಲಕ್ರಮೇಣ ಸರಕಾರದ ಕಾನೂನು ಕಾಯಿದೆಯಿಂದ ಈ ಪದ್ಧತಿಯನ್ನು ನಾವು ಸಡಿಲಿಕೆ ಮಾಡಿದ್ದೇವೆ. ಈ ಮನೆಗೆ
ಹಿರಿಯರಾದ ದಿ:ಶಾಂತರಾಮ ಹೆಗಡೆಯವರು 1988 ಇಸವಿಯಿಂದ ಕಟೀಲು ಮೇಳದ ಆಟವನ್ನು ಆರಂಭಿಸಿದರು. ಅದು ಇಂದಿನವರೆಗೂ ನಡೆಯುತ್ತಾ ಇದೆ.ಅವರು ತೀರಿಹೋದ ನಂತರ 2005 ಇಸವಿಯಿಂದ ಕುಟುಂಬದ ಪರವಾಗಿ ನಡೆಯುತ್ತಿದೆ. ನಮ್ಮ ಮನೆತನದ ಹಿರಿಯರು ಯಕ್ಷಗಾನ ಕಂಬಲ ಕೋಳಿಅಂಕ ಮೊದಲಾದ ಕಾರ್ಯಕ್ರಮಗಳಿಗೆ
ಪ್ರೋತ್ಸಾಹ ನೀಡಿ ಅದರಲ್ಲಿ ಭಾಗವಹಿಸಿ ಈ ಮನೆತನಕ್ಕೆ ಹೆಸರನ್ನು ತಂದಿದ್ದಾರೆ.
ಈ ಮನೆತನದಲ್ಲಿ 1977 ಇಸವಿಯಲ್ಲಿ ಮಂಜಪ್ಪ ಬಾಕ್ಯಾರ್ ಎನ್ನುವ ಗದ್ದೆಯಲ್ಲಿ ದೊಂಪದ ಬಲಿ (ನೇಮ) 2000 ಇಸವಿಯಲ್ಲಿ ಎರಡು ದಿನದ ಧರ್ಮನೇಮ 2005 ಇಸವಿಯಲ್ಲಿ ಜಾಂಬವತಿ ಶೆಟ್ಟಿಯವರ ಮಗ ಸತೀಶ್ ಶೆಟ್ಟಿ ಅವರ ಮೂರು ದಿನದ ಹರಕೆಯ ಧರ್ಮನೇಮ 2001 ನೇ ಇಸವಿಯಲ್ಲಿ ಕುಟುಂಬದ ಸತ್ಯದೇವತೆ ಪಂಜುರ್ಲಿ ಮೊದಲಾದ ದೈವಗಳಿಗೆ ಕೋಲವಾಗಿತ್ತು
2015 ರಲ್ಲಿ ಗುರುರಾಜ ಮಾಡರಿಗೆ ಗಡಿಯಾಗುವ ಸಮಯದಲ್ಲಿ ನಾಲ್ಕು ದಿನದ ಧರ್ಮನೇಮ ವಾಗಿತ್ತು. ಈ ಮನೆಯ ಎದುರಿನ ಮುಡಾಯಿ ಎನ್ನುವ ದೊಡ್ಡ ಗದ್ದೆಯ ಎನೇಲು ಬೇಸಾಯದ ಸಮಯದಲ್ಲಿ ಮನೆ ಯಜಮಾನ ಉಪವಾಸವಿದ್ದು, ಈ ಗದ್ದೆಯ ಭತ್ತದ ನಾಟಿ ಆದಮೇಲೆ ಗದ್ದೆಯ ಮಧ್ಯದಲ್ಲಿ ಒಂದು ಹುಲಿಯ
ರೂಪವನ್ನು (ಕಾಪು) ಮಾಡಿಟ್ಟು, ಎಲ್ಲ ಹೆಂಗಸರು ಗದ್ದೆಯ ಬದಿಯಲ್ಲಿ ನಿಂತು "ಉದೋ ಉದೋ" ಎಂದು ಹೇಳುವ ಕ್ರಮವಿತ್ತು. ಈ ಮನೆತನಕ್ಕೆ ಊರಿನ ಜಾತ್ರೆ ಮತ್ತು ನೇಮದ ದಿನ ಪ್ರಸಾದ ಹಾಗೂ ಮರಿಯಾದೆ ಸಲ್ಲುತ್ತದೆ ನಮ್ಮ ಊರಿನಲ್ಲಿ ಯಾವ ಮನೆಯಲ್ಲೂ ಸರಳ ಜುಮಾದಿ ನೇಮವಾದರೆ ಅದರ
ಬದಿಕರ ತಾರಯಿ (ತೆಂಗಿನಕಾಯಿ)ನಮ್ಮ ಮನೆಗೆ ಸಲ್ಲುತ್ತದೆ.ನಮ್ಮ ಹಿರಿಯರಾದ ದಿ:ಶಾಂತರಾಮ ಹೆಗ್ಡೆಯವರು. ಪಾರಾಳೆ ಗುತ್ತು ಮನೆಯ ಹತ್ತಿರ ಇರುವ ಊರಿನ ಪಾಲ್ದಟ್ಟೆ ಸ್ನಾನಕ್ಕೆ ಧ್ವಜಾರೋಹಣದ ಗರುಡ (ಬೆಳ್ಳಿಯ ಗರಡೆ) ನೀಡಿದ್ದರು. ಇದರ ನೆನಪಿಗಾಗ ಪಾಲ್ದಟ್ಟೆ ಸಾನದಲ್ಲಿ ನಡೆಯುವ
5 ದಿನದ ನೇಮಗಳಲ್ಲೂ ನಮ್ಮ ಮನೆಗೆ ಗಂಧಪ್ರಸಾದ ಸಲ್ಲುತ್ತದೆ. ಸೋಮನಾಥ ದೇವಸ್ಥಾನಕ್ಕೆ ನಮ್ಮ ಕುಟುಂಬದ ಗೋಪಾಲಶೆಟ್ಟಿ ಮತ್ತು ದಯಾನಂದ ಶೆಟ್ಟಿ ಇವರ ಸೇವಾ ರೂಪವಾಗಿ ದೇವರಿಗೆ ಸುಮಾರು 20 ಲಕ್ಷ ಮೌಲ್ಯದ ಚಿನ್ನದ ಬಲಿಮೂರ್ತಿ ಹಾಗೂ ಚಿನ್ನದ ಸತ್ತಿಗೆಯನ್ನು 2019 ನೇ ಇಸವಿಯಲ್ಲಿ
ಸಮರ್ಪಿಸಲಾಯಿತು. ಇದರ ನೆನಪಿಗಾಗಿ ದೇವರ ಜಾತ್ರೆಯ ಸಮಯದಲ್ಲಿ ಪ್ರಸಾದ ಸಲ್ಲುತ್ತದೆ.
ಪೆರ್ಮುದೆ ಊರಿನ ದೈವಗಳ ಆಭರಣ(ಪದ್ದೆಯಿ) ನಮ್ಮ ಮನೆಯಲ್ಲಿದೆ. ಸುಮಾರು ನೂರು ವರ್ಷಗಳಿಂದ ಈ ದೈವಗಳ ಆಭರಣವನ್ನು ನೀಡುವ ಅಧಿಕಾರ ನಮ್ಮ ಮನೆಗೆ ಇದೆ. ನೇಮದ ದಿನ ಈ ಬಂಗಾರವನ್ನು ನೇಮ ಅಗುವಲ್ಲಿಗೆ ಕೊಂಡೊಗಿ ನಂತರ ಅದನ್ನು ವಾಪಸ್ ತರುವ ಜವಾಬ್ದಾರಿ ನಮ್ಮ ಮನೆಗಿದೆ.